ಐಪಿಲ್ ಎಂಬುದು ಸ್ವಾರ್ಥಿಗಳ ಆಟ
“ದಿನಗಳೆದಂತೆ ದೇಶದುದ್ದಗಲಕ್ಕೂ, ಮನೆ-ಮನಗಳಲ್ಲಿ ಐಪಿಲ್ ಜ್ವರದ ಬಿಸಿಯೇರುತ್ತಿದೆ. ಕ್ರಿಕೆಟ್ಟಿನ ಅನಿಶ್ಚತೆ-ರೋಚಕತೆ ನಶೆಯೇರಿಸುತ್ತಿದೆ. ಈ ಎಲ್ಲ ಆವೇದನೆ-ಆಕರ್ಷಣೆಗಳಿಂದ ಹೊರಬಂದು, ಅರಿವಿನ ಕಂಗಳಿಂದ ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೆಲ್ಲ ಮಾರ್ಮಿಕ ಸತ್ಯಗಳು ಗೋಚರಿಸುತ್ತವೆ. ಏನೇನೆಲ್ಲ ಕಟುವಾಸ್ತವಗಳು ಅನಾವರಣಗೊಳ್ಳುತ್ತವೆ. ಜೀವ-ಜೀವನದ ಎಂತೆಂತಹ ತತ್ವ-ಸತ್ವಗಳೊಂದಿಗೆ ಐಪಿಲ್ ಸಮೀಕರಣಗೊಳ್ಳುತ್ತದೆ. ಅಂತಹ ಸಂಗತಿಗಳ ಸುತ್ತ ಹೆಣೆದ ಹತ್ತು ಹನಿಗವಿತೆಗಳು. ಗುಪ್ತ-ಸುಪ್ತ ಭಾವ-ಭಾಷ್ಯಗಳ ಅಭಿವ್ಯಕ್ತಿಸುವ ಅಕ್ಷರಪ್ರಣತೆಗಳಿವು. ಒಪ್ಪಿಸಿಕೊಳ್ಳಿ..” - ಪ್ರೀತಿಯಿಂದ ಎ.ಎನ್.ರಮೇಶ್.ಮ.
ಐಪಿಎಲ್ ಸಾಕ್ಷೀಕರಿಸುತ್ತಿಹ ಸತ್ಯಗಳು..
- ಸತ್ಯ ಒಂದು-
ಸೋಲು-ಗೆಲುವು ಯಾವ ಶೃಂಖಲೆಯು ನಿಶ್ಚಿತವಲ್ಲ
ಅಂಕಿ-ಹುದ್ದರಿ ಏನೊಂದು ದಾಖಲೆಯು ಶಾಶ್ವತವಲ್ಲ.!
ಪ್ರತಿದಿನವೂ.. ಪ್ರತಿಪಂದ್ಯವೂ ಅನೂಹ್ಯ ವಿಸ್ಮಯ
ನಿತ್ಯ ನವತಾರೆಗಳ ಉದಯ ಬರೆದಿದೆ ಹೊಸಅಧ್ಯಾಯ.!
******
- ಸತ್ಯ ಎರಡು-
ಆಟ ಆಡುವವರೆಗಷ್ಟೇ ಸಂಗಡಿಗರು-ಎದುರಾಳಿಗಳು
ಆಟ ಮುಗಿದ ಮೇಲೆ ಶತೃಗಳು-ಮಿತ್ರರು ಎಲ್ಲ ಒಂದೆ.!
ಅಂಕಣದಲ್ಲಿರುವವರೆಗಷ್ಟೇ ಜಿದ್ದು, ಹೋರಾಟ, ವೈರತ್ವ
ಹೊರಬಂದ ಮೇಲೆ ಬೆಸೆಯುವ ದೇಶ ಭಾಷೆ ಬಂಧುತ್ವ.!
******
- ಸತ್ಯ ಮೂರು-
ಬೆಂಗಳೂರಿನವನು ದೆಹಲಿಗಾಗಿ ಹೊಡೆದಾಡಬಲ್ಲ
ದೆಹಲಿಯವನು ಬೆಂಗಳೂರಿಗಾಗಿ ಬಡಿದಾಡಬಲ್ಲ
ಹಣದೆದುರು ಹುಟ್ಟೂರು ಬಿಟ್ಟೂರು ಒಂದೆ ಎಲ್ಲ
ಯಾರೂ ಬೇರೆಯವರಲ್ಲ.. ಯಾರೂ ನಮ್ಮವರಲ್ಲ!
******
- ಸತ್ಯ ನಾಲ್ಕು-
ಹೋದವರ್ಷ ಹೈದರಾಬಾದಿಗೆ ಅಬ್ಬರಿಸಿದವನು
ಹೆಚ್ಚು ದುಡ್ಡು ಸಿಕ್ಕೊಡನೆ ತಂಡ ಬದಲಾಯಿಸಿ..
ಈ ವರ್ಷ ಕೊಲ್ಕೊತ್ತಾಗೆ ಬೊಬ್ಬಿರಿಯುತಿಹನು
ಹಣ ಖರೀದಿಸಬಲ್ಲುದು ಪ್ರೀತಿ-ನಿಯ್ಯತ್ತು ಎಲ್ಲವನು.!
******
- ಸತ್ಯ ಐದು-
‘ಈಸಲ ಕಪ್ಪು ನಮ್ಮದೇ’ ಎಂದು ಹೇಳಿ ಹೇಳಿ..
ಮುಪ್ಪು ಆವರಿಸಿದರೂ ಕಪ್ಪು ನಮ್ಮದಾಗಲಿಲ್ಲ
ಅಪ್ಪಿ-ತಪ್ಪಿಯೂ ಕಪ್ಪಿನ ಮೇಲೆ ಕೈಯಿಡಲಾಗಿಲ್ಲ.!
******
- ಸತ್ಯ ಆರು-
ಐಪಿಲ್ ಎಂಬ ಸಮ್ಮೋಹನದ ಮಂತ್ರದಂಡ
ಬದಲಿಸಿದೆ ಆಯ್ಕೆ ಅರ್ಹತೆಗಳ ಮಾನದಂಡ
ರಾತ್ರೋರಾತ್ರಿ ಉದಯಿಸಿಹರು ನಿತ್ಯ ನವತಾರೆ
ಬಡವರ ಮಕ್ಕಳ ಉಡಿಗೂ ಹರಿದಿದೆ ಧನಧಾರೆ.!
******
- ಸತ್ಯ ಏಳು-
ಐಪಿಲ್ ಬದಲಿಸಿದೆ ಆಟದ ಶೈಲಿ
ಆಗಿಹುದು ಅಕ್ಷರಶಃ ಹಣದ ಥೈಲಿ
ಪ್ರೇಕ್ಷರಿಗೆ ರಣರೋಚಕತೆ ಹೋಲಿ
ಧನಿಕರಿಗೆ ಮೋಜುಮಸ್ತಿ ಖಯಾಲಿ
ಬಿಸಿಸಿಐಗೆ ಇದು ಬಂಗಾರದ ಕೋಳಿ.!
******
- ಸತ್ಯ ಎಂಟು-
ಸಚಿನ್ ಮಗ, ಶಾರುಖ್ ಅಳಿಯ ಯಾರಾದರೇನು?
ಪ್ರತಿಭೆಯಿದ್ದರಷ್ಟೇ ಸ್ಥಾನ. ಆಟವಿದ್ದರಷ್ಟೆ ಮನ್ನಣೆ
ಜಾತಿ, ರಾಜ್ಯ, ರಾಷ್ತ್ರ ಕೀರ್ತಿ, ವಶೀಲಿಗಿಲ್ಲ ಬೆಲೆ
ಗೆಲ್ಲಿಸುವ ಸಾಮರ್ಥ್ಯವಿದ್ದರಷ್ಟೆ ತಂಡದಲ್ಲಿ ನೆಲೆ.!
******
- ಸತ್ಯ ಒಂಬತ್ತು-
ಐಪಿಎಲ್ ಬೆಳೆದಿದೆ ರಾಜ್ಯ ರಾಷ್ಟ್ರಗಳನೆಲ್ಲ ಮೀರಿ
ಐಪಿಎಲ್ ಬೆಸೆದಿದೆ ಜಾತಿ ಧರ್ಮಗಳನೆಲ್ಲ ತೂರಿ
ಐಪಿಎಲ್ ಬೆಳಗಿದೆ ಭಾವ ಭಾಷೆಗಳನೆಲ್ಲ ಏರಿ
ಐಪಿಎಲ್ ಮಾರಿಕೊಂಡಿದೆ ಉದ್ಯಮಿಗಳ ಸಿರಿಗೆ
ಮಂಡಿಯೂರಿ ಕುಳಿತಿದೆ ಬಂಡವಾಳಶಾಹಿಗಳೆದುರಿಗೆ.!
- ಸತ್ಯ ಹತ್ತು-
ನೋಡುವವರಿಗಷ್ಟೇ ಕ್ರೀಡಾಸ್ಫೂರ್ತಿ ಮಮಕಾರ
ಆಡುವವರಿಗೆ ಆಡಿಸುವವರಿಗೆ ಕೇವಲ ವ್ಯವಹಾರ
ಆಟಗಾರನಿಗೆ ಜೇಬು ತುಂಬಿಕೊಳ್ಳುವ ಹಾಹಾಕಾರ
ಮಾಲೀಕನಿಗೆ ಲಾಭ ಮಾಡಿಕೊಳ್ಳುವ ಹುನ್ನಾರ.!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏