_ ಜಯತು ಕೋದಂಡರಾಮ ಜಯತು ದಶರಥರಾಮ _ , _ಶ್ರೀ ಪುರಂದರದಾಸರ ರಚನೆ , ರಾಗ ಹಿಂದೋಳ , ಖಂಡಛಾಪುತಾಳ

_ ಜಯತು ಕೋದಂಡರಾಮ ಜಯತು ದಶರಥರಾಮ _ , _ಶ್ರೀ ಪುರಂದರದಾಸರ ರಚನೆ , ರಾಗ ಹಿಂದೋಳ , ಖಂಡಛಾಪುತಾಳ
 #ಜಯತು #ಕೋದಂಡರಾಮ #ಜಯತು #ದಶರಥರಾಮ _#ಶ್ರೀ ಪುರಂದರದಾಸರ #ರಚನೆ , #ರಾಗ #ಹಿಂದೋಳ , #ಖಂಡಛಾಪುತಾಳ



*ಶ್ರೀವಿಜಯದಾಸಾರ್ಯ ವಿರಚಿತ ಹರಿನಾಮ ಸುಳಾದಿ*  ಮತ್ತು ನೈವೇದ್ಯ ಪ್ರಮೇಯ*


*ರಾಗ ಕಾಂಬೋಧಿ* 

*ಧ್ರುವತಾಳ* 

ಹರಿಯೆ ಜಗದ ದೊರಿಯೆ ನಿರುತ ಭಾಗ್ಯದ ಶಿರಿಯೆ
ದುರಿತ ಗಜಕೆ ಸರಿಯೆ ದನುಜಾರಿಯಾ
ಸ್ಮರಣೆಯ ಮಾಡಲರಿಯಾ ಅರಿಯದ ನರಗುರಿಯ
ಕರಿಸಿ ಯಮ ಪರಿಪರಿಯಾ ತೀವರುರಿಯಾ
ನರಕಾದಿಗೆ ಗುರಿಯಾ ನಿರಿಸುವನು ಘನಸಿರಿಯಾ
ವರ ಕಲ್ಪ ಕಲ್ಪಕ್ಕೆ ದೋಷಕಾರಿಯಾ
ದುರತಿಕ್ರಮ ನಾಮ *ವಿಜಯವಿಟ್ಠಲನ್ನ* 
ಮರಿಯಾದಿರೆ ವಿರಂಚಿ ದುರ್ಲೇಖ ಬರಿಯಾ ॥ 1 ॥ 

*ಮಟ್ಟತಾಳ* 

ಸ್ನಾನ ಜಪ ತಪವು ಮೌನವನುಷ್ಠಾನ
ದಾನ ಪರ್ವಣಿ ಪುಣ್ಯ ಜ್ಞಾನ ಸುಯಾಗಗಳು 
ನಾನಾಕ ಯಾತ್ರಿಗಳು ಏನೇನು ಕರ್ಮ ನಿ -
ದಾನದಿಂದಲಿ ಮಾಡೆ ಶ್ರೀನಾರೇಯಣನ
ಧ್ಯಾನ ನಾಮಂಗಳು ತಾ ನುಡಿಯದಿರೆ ಕಾಣರು ನಿರ್ವಾಣ 
ಅನಾದಿ ನಿಧನ *ವಿಜಯವಿಟ್ಠಲನ್ನ* 
ನೀನೆ ಎನ್ನದವನು ಜ್ಞಾನಿಯಾದರೇನು ॥ 2 ॥ 

*ತ್ರಿವಿಡಿತಾಳ* 

ಹಲವು ವೇದಗಳೋದಿ ಹಲವು ಕೇಳಿದರೇನೂ
ಇಳಿಯೊಳು ಯತಿಯಾಗಿ ಚರಿಸಲೇನೂ 
ಬಲು ವಿವೇಕ ಮತಿ ಸತತವಾದರು ತನ್ನ
ಒಳಗಿದ್ದ ನರಹರಿಯ ಗೆಳೆಯನೆಂದರಿಯಾದೆ
ಕಲಿ ಮಾನವನು ಧರ್ಮಾವಳಿ ನೆಸಗಿದರೇನೂ
ಫಲವಿಲ್ಲವೊ ಬಲುಕಾಲ ಬಳಲಿದರೂ 
ಬೆಳೆದ ಗಿಡದ ತುದಿಗೆ ಫಲ ಪುಟ್ಟಿದಂತೆಯೊ
ಕುಲಜಿ ಮಕ್ಕಳ ಪಡೆದು ನೆಲೆಯಾಗದಂತೆ 
ಜಲಜನಾಭನ ಭಕ್ತಿ ಮಿಳಿತವಿಲ್ಲದ ಧರ್ಮ
ಮಳಲೊಳು ಗೋಕ್ಷೀರ ಎರದಂತೆ ಯಾಗುವದೂ
ಚಲುವ ಗದಾಗ್ರಜ *ವಿಜಯವಿಟ್ಠಲನ್ನ* 
ಸಲೆ ನಾಮ ಸ್ಮರಿಸದೆ ಸಂಸಾರ ಹರವಿಲ್ಲ ॥ 3 ॥ 

*ಅಟ್ಟತಾಳ* 

ಹರಿನಾಮದಲಿಂದ ಪರಗತಿಯಾದಂತೆ 
ಧರೆಯೊಳಗುಳ್ಳ ವಿಸ್ತಾರ ಕರ್ಮವ 
ಮರಿಯದೆ ವಿರಚಿಸಿ ಇರಳು ಹಗಲು ಇರೆ 
ಕಿರಿಯ ದೋಷಂಗಳು ತೆರಳಿದಂತೆ ಪೋಗಿ 
ತಿರುಗಿ ಸೇರಿಕೊಂಡು ಭರತವಾಗಿಪ್ಪವೊ
ನರನು ತಿರುಗುತ ಕೆಸರನು ತುಳಿದು ಬಂದು 
ಮರಳೆ ಕೆಸರಿನಲ್ಲಿ ಚರಣವ ತೊಳೆದಂತೆ
ಹಿರಿದಾಗಿ ಕರ್ಮವ ಹರುಷದಿಂದಲಿ ಮಾಡೆ 
ಪರಿಪೂರ್ಣವಾಗದೆ ದುರಿತ ಸಂಘಟಿಸೋದು
ಸುರಧೀಶ ವಿಕ್ರಮ *ವಿಜಯವಿಟ್ಠಲನ್ನ* 
ಸ್ಮರಣೆ ಸರ್ವಕ್ಕೆ ಪ್ರಾಯಶ್ಚಿತ್ತ ಭೂತಾ ॥ 4 ॥ 

*ಆದಿತಾಳ* 

ದ್ವೇಷದಲಿಯಾಗಲಿ ಪರಿಹಾಸ್ಯದಲ್ಲಿಯಾಗಲೀ 
ಭಾಸದಲ್ಲಿ ಆಗಲಿ ಆಭಾಸದಲ್ಲಿ ಆಗಲೀ
ಕ್ಲೇಶದಲ್ಲಿ ಆಗಲೀ ಅಕ್ಲೇಶದಲ್ಲಿ ಆಗಲೀ
ಮೀಸಲಾದ ಅಜ್ಞಾನದಲ್ಲಿ ಆಗಲಿ 
ಆಶೆಯನ್ನು ಬಿಟ್ಟು ವಿಶೇಷ ಭಕುತಿಯಿಂದಲಿ
ದಾಸನೆಂದು ಕೈಯ್ಯ ಮುಗಿದು ನೀ ಸಲಹು ಹರಿ ಎನಲು 
ಏಸೇಸು ಜನ್ಮದ ಅಘ ನಾಶವಾಗುವದು
ಈಶ ನಹುಷ *ವಿಜಯವಿಟ್ಠಲ* ಅಶೇಷ ದೋಷದೂರ 
ವಾಸವಾಗಿ ಹೃದಯದೊಳು ವಾಸನಾಮಯ ನೆನಿಸುವ ॥ 5 ॥ 

*ಜತೆ* 

ಹರಿನಾಮದಿಂದಲಿ ಸಂಸಾರ ನಿವೃತ್ತಿ
ಸ್ಥಿರವೆಂದವರ ಬಿಡನು ಸುತಪ *ವಿಜಯವಿಟ್ಠಲ* ॥



*ಹರಿಯ ನೆನಸಿದ ದಿವಸ ಶುಭಮಂಗಳಾ*|| ಪ||
*ಹರಿಯ ನೆನಸದ ದಿವಸ ಅವಮಂಗಳಾ* ||ಅ.ಪ||

*ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ |*
*ಹರಿಯ ನೆನಸದ ಘಳಿಗೆ ಯಮನ ಬಳಿಗೆ*| |1|

*ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ |*
*ಹರಿಯ ನೆನಸದ ಪ್ರಹರ ಹೀನಾಚಾರ ||*

*ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು |*
*ಹರಿಯ ನೆನಸದ ಹಗಲು ನರಕಕ್ಕೆ ತಗಲು*|| |2|

*ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ |*
*ಹರಿಯ ನೆನಸದ ಮಧ್ಯಾಹ್ನವೇ ಕಾನನ ||*
*ಹರಿಯ ನೆನಸಿದ ಸಾಯಂಕಾಲವೇ ಸುಕಾಲ |*
*ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ*|||3|

*ಹರಿಯ ನೆನಸಿದ ದಿನವು ನರನಿಗೆ ಸಮ್ಮತವು |*
*ಹರಿಯ ನೆನಸದ ದಿನವು ದುರ್ದಿನವು ||*
*ಹರಿಯ ನೆನಸಿದ ನರನು ಅವನೇ ಕೃತಕೃತ್ಯ |*
*ಹರಿಯ ನೆನಸದ ನರಜನ್ಮ ವ್ಯರ್ಥಾ*|| |4|

*ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ |*
*ಹರಿಯ ನೆನಸದ ರಾತ್ರಿ ಮದ್ಯ ಪಾನ ಪಾತ್ರೆ ||*
*ಪುರಂದರನ ಪ್ರಿಯ ಸಿರಿ ವಿಜಯವಿಠ್ಠಲನಂಘ್ರಿ |*
*ಮರಿಯದೇ ಸದಾ ನೆನೆವವನೆ ಮುಕ್ತ ||*

*ಹರಿಯ ನೆನಸಿದ ರಾತ್ರಿ ತೀರ್ಥ ಕ್ಷೇತ್ರದ ಯಾತ್ರೆ.*
ಇದು ಶ್ರೀ ವಿಜಯಪ್ರಭುಗಳ ವಾಣಿ.






*ನೈವೇದ್ಯ ಪ್ರಮೇಯ* 

ನೈವೇದ್ಯ ಪ್ರಕಾರ ಮತ್ತು ಅಲ್ಲಿ ಚಿಂತಿಸಬೇಕಾದ ದೇವತೆಗಳನ್ನು , ತೋರಿಸಬೇಕಾದ ಮುದ್ರೆಗಳನ್ನು ಸಂಕ್ಷಿಪ್ತವಾದ ಶಬ್ದಗಳಲ್ಲಿ , ವಿಸ್ತಾರವಾದ ವಿಚಾರಗಳನ್ನು ಶ್ರೀ ವಿಜಯಸಾರ್ಯರು ತಿಳಿಸಿದ್ದಾರೆ

*ರಾಗ ಅಭೋಗಿ ಭಾಮಿನಿ ಷಟ್ಪದಿ* 

ಶ್ರೀಪತಿಯ ನೈವೇದ್ಯ ಕೊಡುವದು ।
ಧೂಪದಾಂತರ ಭೂಮಿ ಶೋಧನ ।
ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ।
ಸೂಪ ಅನ್ನವು ಅಗ್ನಿಕೋಣದಿ ।
ಆ ಪರಮ ಅನ್ನವನು ಈಶಾ ।
ನ್ಯಾಪೆಯಾ ಲೇಹ್ಯಗಳ ನೈರುತ್ಯದಲಿ ಇಟ್ಟು ತಥಾ ॥ 1 ॥ 

ವಾಯುದಿಶದಲಿ ಉಪಸುಭೋಜ್ಯವು ।
ಪಾಯಸನ್ನದ ಮಧ್ಯ ಘೃತ ಸಂ - ।
ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ।
ಬಾಯಿಯಿಂದಲಿ ದ್ವಾದಶ ಸ್ತುತಿ ।
ಗಾಯನದಿ ನುಡಿಯುತಲಿ ಈ ಕಡೆ ।
ಆಯಾ ಅಭಿಮಾನಿಗಳು ದೇವತಿಗಳನು ಚಿಂತಿಸುತ ॥ 2 ॥ 

ಓದನಕ ಅಭಿಮಾನಿ ಶಶಿ ಪರ - ।
ಮೋದನಕ ಅಭಿಮಾನಿ ಭಾರತಿ ।
ಆ ದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ।
ಸ್ವಾದುಕ್ಷೀರಕೆ ವಾಣಿ ಮಂಡಿಗಿ - ।
ಲೀ ದ್ರುಹಿಣ ನವನೀತ ಪವನಾ - ।
ದಾದಧಿಗೆ ಶಶಿ ವರುಣ ಸೂಪಕೆ ಗರುಡ ಅಭಿಮಾನಿ ॥ 3 ॥ 

ಶಾಕದಲಿ ಶೇಷಾಮ್ಲ ಗಿರಿಜಾ ।
ನೇಕನಾಮ್ಲದಿ ರುದ್ರ ಸಿತದಲಿ ।
ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ।
ಈ ಕಟು ಪದಾರ್ಥದಲಿ ಯಮ ಬಾ - ।
ಹ್ಲೀಕ ತಂತುಭದಲ್ಲಿ ಮನ್ಮಥ -।
ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ ॥ 4 ॥ 

ಕೂಷುಮಾಂಡದ ಸಂಡಿಗೆಲಿ ಕುಲ ।
ಮಾಷದಲಿ ದಕ್ಷ ಪ್ರಜಾಪತಿ ।
ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ।
ಈ ಸುಫಲ ಷಡ್ರಸದಿ ಪ್ರಾಣ ವಿ - ।
ಶೇಷ ತಾಂಬೂಲದಲಿ ಗಂಗಾ ।
ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ ॥ 5 ॥ 

ಸಕಲ ಭಕ್ಷಗಳಲ್ಲಿ ಉದಕದಿ ।
ಭುಕು ಪದಾರ್ಥಕೆ ವಿಶ್ವ ಮೂರುತಿ ।
ಮುಖದಲೀ ನುಡಿ ಅಂತಿಲೀ ಶ್ರೀಕೃಷ್ಣ ಮೂರುತಿಯ ।
ನಖ ಚತು ಪದಾರ್ಥದಲಿ ಆ ಸ - ।
ಮ್ಯಕು ಚತುರವಿಂಶತಿ ಅಭಿಮಾ - ।
ನಿಕರ ಚಿಂತಿಸಿ ಸರ್ಪಿ ಸಹ ಶ್ರೀತುಳಸಿಯನು ಹಾಕಿ ॥ 6 ॥ 

ಕ್ಷೀರ ದಧಿ ಕರ್ಪೂರ ಸಾಕ - ।
ರ್ಜೀರ ಪನಸ ಕಪಿಥ್ಥ ಪಣ್ಕದ - ।
ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ।
ಪೂರ ಶಂಖದಿ ಉದಕ ಓಂ ನಮೊ ।
ನಾರೆಯಣಾ ಅಷ್ಟಾಕ್ಷರವು ತನ ।
ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ ॥ 7 ॥ 

ಸೌರಭೀ ಮಂತ್ರದಲಿ ಪ್ರೇಕ್ಷಿಸಿ ।
ತೋರಿ ತೀವ್ರದಿ ಮುದ್ರಿ ನಿರ್ವಿಷ ।
ಮೂರೆರಡು ಮೊದಲಾಗಿ ಶಂಖವು ಅಂತಿ ಮಾಡಿ ತಥಾ ।
ಪೂರ್ವ ಆಪೋಶನವು ಹೇಳಿ ಅ - ।
ಪೂರ್ವ ನೈವೇದ್ಯವು ಸಮರ್ಪಿಸಿ ।
ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ ॥ 8 ॥ 

ಪೂಗ ಅರ್ಪಿಸಿದಂತರದಿ ಅತಿ ।
ಬ್ಯಾಗದಲಿ ಲಕ್ಷ್ಯಾದಿ ನೈವೇ - ।
ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ।
ಸಾಗಿಸೀ ಶ್ರೀಹರಿಯ ಸಂಪುಟ - ।
ದಾಗ ನಿಲ್ಲಿಸಿ ವೈಶ್ವದೇವವು ।
ಸಾಗಿಸೀ *ಶ್ರೀವಿಜಯವಿಠಲನ* ಧೇನಿಸುತ ಮುದದಿ ॥



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ