ಮಾಹಿತಿ ಆಯೋಗದ ಮಹತ್ವದ ಆದೇಶ: ಅರ್ಜಿದಾರರಿಗೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಬೇಕು* ಬೆಂಗಳೂರು, ಜು. 20: ಕರ್ನಾಟಕ ಮಾಹಿತಿ ಆಯೋಗವು ಮಹತ್ವದ
*ಮಾಹಿತಿ ಆಯೋಗದ ಮಹತ್ವದ ಆದೇಶ: ಅರ್ಜಿದಾರರಿಗೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಬೇಕು*
ಬೆಂಗಳೂರು, ಜು. 20: ಕರ್ನಾಟಕ ಮಾಹಿತಿ ಆಯೋಗವು ಮಹತ್ವದ ಆದೇಶವೊಂದನ್ನು ನೀಡಿದ್ದು, ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಯನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಅರ್ಜಿದಾರರಿಗೆ ಒದಗಿಸಬೇಕು ಎಂದು ನಿರ್ದೇಶಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ ನಾಗರಾಜು ಎಂ.ಆರ್. ಅವರು 2022ರ ಆಗಸ್ಟ್ 4ರಂದು ಮಳವಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿನ 2021ರ ಅಕ್ಟೋಬರ್ 10ರಿಂದ 2022ರ ಮಾರ್ಚ್ 31ರವರೆಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು. ಈ ದೃಶ್ಯಾವಳಿ ತಮ್ಮ ವಿರುದ್ಧದ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ಆದರೆ, ಸಂಬಂಧಿಸಿದ ಪೊಲೀಸ್ ಠಾಣೆಗಳ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿದ್ದರು. ಅರ್ಜಿ ತನ್ನ ಅಧಿಕಾರ ವ್ಯಾಪ್ತಿಗೆ ಸೇರದಿದ್ದರೂ ಅದನ್ನು ಸಂಬಂಧಿಸಿದ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಬೇಕಿದ್ದ ಅಂದಿನ ಡಿವೈಎಸ್ಪಿ ಅದನ್ನು ಮಾಡದೇ ಕೇವಲ ಠಾಣೆಗಳಿಗೆ ಜ್ಞಾಪನಾ ಪತ್ರ ಕಳುಹಿಸಿದ್ದರೆಂದು ಮಾಹಿತಿ ಆಯೋಗವು ಕಂಡುಹಿಡಿದಿದೆ.
ನಂತರ ಠಾಣಾಧಿಕಾರಿಗಳು "ಸಿಸಿಟಿವಿ ದೃಶ್ಯಾವಳಿ ನೀಡಲು ಸಾಧ್ಯವಿಲ್ಲ" ಎಂಬ ಅನುಮೋದನೆಯನ್ನು ಹಿರಿಯ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ನೀಡಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು, ಸಿಸಿಟಿವಿ ದೃಶ್ಯಾವಳಿಯ ಹಾರ್ಡ್ ಡಿಸ್ಕ್‌ಗಳನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಪರಿಶೀಲನೆಗಾಗಿ ಸಲ್ಲಿಸುವಂತೆ ಸೂಚಿಸಿದರು. ಪರಿಶೀಲನೆಯ ಬಳಿಕ ಅರ್ಜಿದಾರರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಸಂದರ್ಭಕ್ಕೆ ಸಂಬಂಧಿಸಿದ ದೃಶ್ಯಾವಳಿಯನ್ನು ಅವರಿಗೆ ನೀಡಬೇಕು ಹಾಗೂ ಉಳಿದ ಭಾಗಗಳನ್ನು ಮರೆಮಾಚಿ (masking) ಗೌಪ್ಯತೆ ಕಾಪಾಡಬೇಕು ಎಂದು ಆದೇಶಿಸಿದರು.
ಆಯೋಗದ ಆದೇಶದಂತೆ ನಂತರ ಅರ್ಜಿದಾರರಿಗೆ ಸಂಬಂಧಿತ ಸಿಸಿಟಿವಿ ದೃಶ್ಯಾವಳಿಯನ್ನು ಒದಗಿಸಲಾಗಿದೆ.
ಇದರ ಜೊತೆಗೆ, ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಎರಡು ಪೊಲೀಸ್ ಠಾಣೆಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಆಗಿನ ಡಿವೈಎಸ್ಪಿ ನವೀನ್ ಕುಮಾರ್ (ಪ್ರಸ್ತುತ ಬಳ್ಳಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ) ವಿರುದ್ಧ ಶಿಸ್ತು ಕ್ರಮ ಆರಂಭಿಸಲು ಮಾಹಿತಿ ಆಯೋಗ ನಿರ್ದೇಶನ ನೀಡಿದೆ. ಅವರಿಗೆ ಈ ಸಂಬಂಧ ನೋಟಿಸ್ ಜಾರಿಯಾಗಿದ್ದು, ಅವರು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಉತ್ತರಿಸಿದ್ದಾರೆ.
RTI ಅಡಿಯಲ್ಲಿ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಯೂ ಸೂಕ್ತ ಸಂದರ್ಭಗಳಲ್ಲಿ ಮಾಹಿತಿಯಾಗಿ ಲಭ್ಯವಾಗಬಹುದು ಎಂಬುದನ್ನು ಈ ಆದೇಶ ಸ್ಪಷ್ಟಪಡಿಸಿದೆ. ಅರ್ಜಿದಾರನಿಗೆ ಸಂಬಂಧಿಸಿದ ಭಾಗವನ್ನು ಮಾತ್ರ ನೀಡುವುದು ಹಾಗೂ ಇತರರ ಗೌಪ್ಯತೆಯನ್ನು ಕಾಪಾಡಲು ಉಳಿದ ದೃಶ್ಯಗಳನ್ನು ಮರೆಮಾಚುವುದು ಕಡ್ಡಾಯ ಎಂದು ಆಯೋಗ ಒತ್ತಿ ಹೇಳಿದೆ. ಅಧಿಕಾರ ವ್ಯಾಪ್ತಿಯಲ್ಲದ ಅರ್ಜಿಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ವರ್ಗಾಯಿಸದೇ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬಹುದು ಎಂಬ ಸಂದೇಶವುಳ ಆದೇಶವನ್ನು ನೀಡಿದ್ದಾರೆ.
ಒಟ್ಟಾರೆ, ಕರ್ನಾಟಕ ಮಾಹಿತಿ ಆಯೋಗದ ಈ ಆದೇಶವು "ಪೊಲೀಸ್ ಕಾರ್ಯವೈಖರಿಯಲ್ಲಿ ಪಾರದರ್ಶಕತೆ, ನಾಗರಿಕರ ಮಾಹಿತಿ ಹಕ್ಕು ಹಾಗೂ ವೈಯಕ್ತಿಕ ಗೌಪ್ಯತೆ – ಈ ಮೂರರ ನಡುವೆ ಸಮತೋಲನ ಸಾಧಿಸಿದ ಮಹತ್ವದ ಆದೇಶ" ಎಂದು ಪರಿಗಣಿಸಬಹುದಾಗಿದೆ.
#state #jds #bjp #minister #Bengaluru #ರ #ಜಿಲ್ಲಾಧಿಕಾರಿ #ಅಧಿಕಾರಿ #ಸಭೆ ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನ #ಮುನಿಸ್ವಾಮಿ #ಗೌಡ
#parliament constitution #primminister #Lokasabe #rajyasabha #president #Sanskrit #cabinet #ಇಂದ್ರಪ್ರಸ್ಥ #ಭಾರತ
#ChethanaMuniswamygowda
#Bharata #budget achivement #people #Kashmir #border #election # #protest #chethanaMuniswamygowda
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏